ಹಾಲಿವುಡ್
	ಅಮೆರಿಕದ ಕ್ಯಾಲಿಫೋರ್ನಿಯದಲ್ಲಿರುವ ಪ್ರಪಂಚ ಪ್ರಸಿದ್ಧ ಚಲನಚಿತ್ರ ನಗರ. ಇದು ಲಾಸ್ ಏಂಜಲೀಸ್‍ನ ಒಂದು ಜಿಲ್ಲೆ. ಇದು ಉತ್ತರಕ್ಕೆ ಗ್ರಿಫಿತ್ ಪಾರ್ಕ್ ಮತ್ತು ಮಲ್ಹಾಲೆಂಡ್ ಡ್ರೈವ್‍ಗಳಿಂದಲೂ ದಕ್ಷಿಣದಲ್ಲಿ ಮೆಲ್ರೋಸ್ ಅವೆನ್ಯುಗಳಿಂದಲೂ ಪೂರ್ವದಲ್ಲಿ ಹೈಪರನ್ ಅವೆನ್ಯು ಮತ್ತು ಪಶ್ಚಿಮದಲ್ಲಿ ಕ್ರೆಸೆಂಟ್ ಹೈಟ್ಸ್ ಬ್ಯೂಯಲ್‍ವಾರ್ಡ್‍ಗಳಿಂದಲೂ ಆವೃತವಾಗಿದೆ. ಈ ಪ್ರದೇಶದಲ್ಲಿನ ಈಗಿನ ಜನಸಂಖ್ಯೆ ಸು. 280,000.

	ಹಾಲಿವುಡ್ ಬೌಲ್ ಎಂಬ ಬಯಲು ರಂಗಮಂದಿರ ಸಿಂಫನಿ ಕಾರ್ಯಕ್ರಮ, ಸಂಗೀತ ಕಚೇರಿ ಹಾಗೂ ಕ್ರಿಸ್‍ಮಸ್ ಉತ್ಸವಗಳಿಗೆ ಪ್ರಸಿದ್ಧ. ಹಾಲಿವುಡ್‍ಬ್ಯೂಯಲ್‍ವಾರ್ಡ್ ಮತ್ತು ವೈನ್ ಸ್ಟ್ರೀಟ್‍ಗಳ ಇಕ್ಕೆಲಗಳಲ್ಲೂ ಸು. 2,000 ನಕ್ಷತ್ರಗಳ ಕಂಚಿನ ಪ್ರತಿಕೃತಿಗಳನ್ನು ಇಡಲಾಗಿದ್ದು, ಇದನ್ನು ವಾಕ್ ಆಫ್ ಫೇಮ್ ಎಂದು ಕರೆಯಲಾಗುತ್ತದೆ. ಪ್ರತಿಯೊಂದು ನಕ್ಷತ್ರದ ಮೇಲೂ ಹಾಲಿವುಡ್‍ನ ಪ್ರಸಿದ್ಧ ವ್ಯಕ್ತಿಯ ಹೆಸರನ್ನು ಕೆತ್ತಲಾಗಿದೆ. ಹಾಲಿವುಡ್ ಎಂದು ಬೃಹತ್ತಾಗಿ ಬರೆಯಲಾದ ಫಲಕವನ್ನು ಇಲ್ಲಿನ ಬೆಟ್ಟವೊಂದರ ಮೇಲೆ 1922ರಲ್ಲಿ ಸ್ಥಾಪಿಸಲಾಯಿತು; ಇದನ್ನು 1978ರಲ್ಲಿ ನವೀಕರಿಸಲಾಯಿತು. ಫಲಕದ ಪ್ರತೀ ಅಕ್ಷರದ ಉದ್ದ 14 ಮೀ. (45 ಅಡಿಗಳು). ಹಾಲಿವುಡ್ ಬಹುಕಾಲ ಸನ್‍ಸೆಟ್ ಬ್ಯೂಯಲ್‍ವಾರ್ಡ್ ಪ್ರದೇಶದ ಒಂದು ಸಣ್ಣ ವಿಭಾಗವಾಗಿತ್ತು. ಇಲ್ಲಿ ರೆಸ್ಟೊರಾಂಟ್, ಅಂಗಡಿ ಮುಂಗಟ್ಟು, ರಂಗಭೂಮಿಗೆ ಸಂಬಂಧಿಸಿದ ಏಜನ್ಸಿಗಳು, ನೈಟ್ ಕ್ಲಬ್ ಮೊದಲಾದವು ಹೆಚ್ಚಾಗಿದ್ದುವು. ಈ ಸಣ್ಣವಿಭಾಗವನ್ನು ಪಶ್ಚಿಮ ಹಾಲಿವುಡ್‍ನೊಂದಿಗೆ 1984ರಲ್ಲಿ ಸೇರಿಸಲಾಯಿತು. 1853ರಲ್ಲಿ ಇಲ್ಲಿ ಸಣ್ಣ ಗುಡಿಸಲೊಂದನ್ನು ನಿರ್ಮಿಸಲಾಯಿತು. 1870ರ ಸುಮಾರಿಗೆ ಇಲ್ಲಿ ಅನೇಕ ಫಾರ್ಮಗಳು ರೂಪಗೊಂಡವು. ಇದು 1903ರಲ್ಲಿ ಹಾಲಿವುಡ್‍ನೊಂದಿಗೆ ಸೇರಿ ಲಾಸ್ ಏಂಜಲೀಸ್‍ನ ಭಾಗವಾಯಿತು(1910). 

	ಹಾಲಿವುಡ್‍ನಲ್ಲಿ ಮೊದಲ ಚಲನಚಿತ್ರ ಸ್ಟೂಡಿಯೋವನ್ನು ನೆಸ್ಟರ್ ಕಂಪನಿ ಸ್ಥಾಪಿಸಿತು (1911). ಹಿತಕರ ವಾಯುಗುಣ, ವೈವಿಧ್ಯಮಯ ನಿಸರ್ಗಸೌಂದರ್ಯಗಳಿಂದ ಇದು ಚಲನಚಿತ್ರ ಉದ್ಯಮದ ಕೇಂದ್ರವಾಯಿತು. 320 ಕಿ.ಮೀ ವ್ಯಾಪ್ತಿಯಲ್ಲಿ ಸಿನಿಮಾ ನಿರ್ಮಾಪಕರಿಗೆ ಬೇಕಾಗುವ ಎಲ್ಲ ಬಗೆಯ ನೈಸರ್ಗಿಕ ಹಿನ್ನೆಲೆಯ ಸೌಲಭ್ಯವೂ ಇಲ್ಲಿ ಲಭ್ಯವಿದೆ. ಹಾಲಿವುಡ್‍ನಲ್ಲಿ ಶಬ್ದ ಚಿತ್ರಗಳ ನಿರ್ಮಾಣ 1920ರ ದಶಕದ ಅಂತ್ಯ ಭಾಗದಲ್ಲಿ ಆರಂಭವಾಯಿತು. ಪ್ರಪಂಚ ಪ್ರಸಿದ್ಧ ನೂರಾರು ಚಿತ್ರಗಳು ಇಲ್ಲಿ ತಯಾರಾದವು. ಕೊಲಂಬಿಯ, ಫಾಕ್ಸ್, ಮೆಟ್ರೊ-ಗೋಲ್ಡ್‍ವಿನ್-ಮೇಯರ್, ಪಾರಾಮೌಂಟ್, ಆರ್‍ಕೆಓ, ಯುನೈಟೆಡ್ ಆರ್ಟಿಸ್ಟ್ಸ್, ಯೂನಿವರ್ಸಲ್, ವಾರ್ನರ್ ಬ್ರದರ್ಸ್ ಮೊದಲಾದವು ಹಾಲಿವುಡ್‍ನ ಪ್ರಮುಖ ಚಿತ್ರ ನಿರ್ಮಾಣ ಕಂಪನಿಗಳು.			
	*

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ